ಕಥೆಯಾದಳೆ ಕವಯಿತ್ರಿ ಇದೊಂದು ಕಾಲ್ಪನಿಕ ಕಾದಂಬರಿಯಾಗಿದ್ದು ಒಟ್ಟಾರೆ ಹೇಳುವುದಾದರೆ ಇದು ಭೂಮಿ ಹಾಗೂ ಮನುಷ್ಯನ ನಡುವಿನ ಸಂಘರ್ಷ.ಇಲ್ಲಿ ಬಾನು ಮತ್ತು ಭೂಮಿಯ ಪ್ರೇಮ ಹಾಗೂ ಮಳೆ ಇಳೆ ಬಾನುವಿನ ಸ್ನೇಹ ,ಪ್ರಕೃತಿ ಮತ್ತು ಪಂಚಭೂತಗಳ ಸಂಬಂಧವನ್ನು ಪರೋಕ್ಷವಾಗಿ ವಿವರಿಸಲಾಗಿದೆ.ಇಲ್ಲಿ ಸ್ವತಂತ್ರ ನಂತರದ ಭಾರತದ ಆಧುನಿಕರಣ ಪ್ರಕೃತಿಯ ಮೇಲೆ ಪರಿಣಾಮ ಬೀರಿದ ರೀತಿಯನ್ನು ವಾಸ್ತವಕ್ಕೆ ಹೋಲಿಸಿ ಹಲವಾರು ಪಾತ್ರಗಳ ಮೂಲಕ ಇಂದು ಆಧುನಿಕತೆಯಿಂದ ಅಳಿಯುತಿರುವ ಕೆಲವೊಂದು ಜನಜೀವನದ ಭಾಗಗಳನ್ನು ಕಥಾವಸ್ತುವನ್ನಾಗಿ ಮಾಡಿ ಅದರಂತೆ ಪಾತ್ರಗಳನ್ನು ಸೃಷ್ಟಿಸಿ ಕಥೆಯನ್ನು ಹೆಣೆಯಲಾಗಿದೆ.

ಸದಾ ನಶೆಯಲ್ಲೆ ಬದುಕ ಕಳೆಯುತಿರುವ ನಾಯಕ ಮುಗಿಲ್,ಅವನನ್ನು ಸರಿದಾರಿಗೆ ತರಲು ಹೆಣಗಾಡೊ ಬಾಲ್ಯದ ಗೆಳತಿ ಆಯೇಷಾ,ಇದ್ಯಾವುದರ ಗೊಡವೆಯಿಲ್ಲದೆ ಸದಾ ವ್ಯಾಪಾರ ವ್ಯವಹಾರದಲ್ಲೆ ಮುಳುಗಿರುವ ನಾಯಕನ ಕುಟುಂಬ,ಅಳಿವಿನ ಅಂಚಿನಲ್ಲಿರುವ ಜೀವನದ ಜೀವಾಳವಾಗಿರುವ ಬೇರುಗಳನ್ನು ಮತ್ತೆ ಚಿಗುರಿಸಲು “ಮರಳಿ ಬೇರಿಗೆ”ಎಂಬ ಸಾಹಿತಿಕ ಅಭಿಯಾನದ ಮೂಲಕ ಸುಧಾತ್ರಿಯ ಹೋರಾಟ,ಗೆಳೆಯನಿಗೆ ಕೊಟ್ಟ ಮಾತನ್ನು ಉಳಿಸಲು ಬದುಕಿನುದ್ದಕ್ಕೂ ಸೂರ್ಯನ ಹೋರಾಟ,ಅಭಿಮಾನಿಯಾಗಿ ಸುಧಾತ್ರಿನ ಬೆಂಬಲಿಸೋ ಕೃತಿ,ಕುಡುಕನಾದರೂ ವಾಸ್ತವವನ್ನು ಅರಿತು ಕೆಲಸ ಮಾಡೋ ಕ್ವಾರ್ಟರ್ ಕರಿಯಪ್ಪ, ತನ್ನ ಕುಟುಂಬದವರಿಂದಾ ಅನ್ಯಾಯದ ವೆಚ್ಚವನ್ನು ಭರಿಸಲು ಬದುಕನ್ನೆ ವ್ಯಯಿಸುವ ಮಾನಸ ಅಕ್ಷರ, ಹಾಗೂ ಮೀರಾ, ಸಹಾಯ ಮಾಡಲು ಬಂದ ಬಡಪಾಯಿ ಜಯಚಂದ್ರ ಅಸಹಾಯಕ ರಾಜಕಾರಣಿಯಾಗಿ ಸಮಾಜದಲ್ಲಿ ಅವನ ಒದ್ದಾಟ, ಸುಧಾತ್ರಿಗಾಗಿ ಬದುಕುವ ಸೀತಜ್ಜಿ ಮತ್ತು ಶೃತಿ, ಅನಾಥೆ ಆಯೇಷಾನ ತನ್ನ ವೃತ್ತಿ ಧರ್ಮದ ಜೊತೆ ಬೆಳೆಸೊ ಸಲೀಂ,ಸುಧಾತ್ರಿ ಅಜ್ಞಾತವಾಸಕ್ಕೆ ಸಹಾಯ ಮಾಡೋ ತಂದೆಯ ಗೆಳೆಯ ಪೀಟರ್,ರಜತ್ ನ ಪ್ರೀತಿಗೆ ಸೋತು ಅವನಿಗಾಗಿ ಜೀವಮಾನವನ್ನೆ ಮುಡುಪಾಗಿಡುವ ಚೋಮ,ಅವಿದ್ಯವಂತರಾದರೂ ಸಂಸ್ಕಾರದಲ್ಲಿ ಶ್ರೇಷ್ಠರಾದ ಬನಸಿರಿಯ ಜನತೆ,ಮುಗ್ದೆ ಚೆನ್ನಿಮತ್ತು ಅಡವಿ,ಇವೆರೆಲ್ಲರ ನಡುವೆ ತಮ್ಮ ಸ್ವಾರ್ಥ ಮೆರೆಸಲು ಅಟ್ಟಹಾಸ ಮಾಡಿ ಮೆರೆವ ದುಶ್ಯಾಸನ ಹಾಗೂ ಅಶೋಕ್,ರಕ್ತಸಂಬಂದದ ಮಮಕಾರದಿಂದ ಕುರುಡಳಾದ ಯಶೋಧಮ್ಮ ಜೊತೆಗೆ ಇನ್ನೂ ಹಲವಾರು ಪಾತ್ರಗಳಿವೆ.
ಇಲ್ಲಿ ಬರುವ ಎಲ್ಲ ಪಾತ್ರಗಳಿಗೆ ಅದರೆ ಆದ ಮಹತ್ವವಿದೆ. ಹಾಗೆಯೇ ಬದುಕಿನಲ್ಲಿ ತನ್ನ ಅಸ್ತಿತ್ವವನ್ನು ಹಲವಾರು ರೂಪದಲ್ಲಿ ಹೇಳಬಯಸುವ ಮನುಷ್ಯ ಸದಾ
ಭ್ರಮೆಯಲ್ಲೆ ಬದುಕುತಿರುವಾಗ ಅವನಿಗೆ ತನ್ನ ಬದುಕಿನ ಕತ್ತಲ ಜಗತ್ತಿನ ಪರಿಚಯವಾದಗಲೇ ವಾಸ್ತವದ ಅರಿವಾಗುವುದು.ಇಲ್ಲಿ ಮುಗಿಲ್ ಸುಧಾತ್ರಿ ಪಾತ್ರ ಕೂಡ ಹಾಗೆಯೇ.ಬಾಳ ಪಯಣದಲ್ಲಿ ನಮ್ಮದೇ ಗುಂಗಲ್ಲಿ ಲೋಕ ಮರೆತು ಪಯಣಿಸುತಿರುವಾಗ ಆಗುವ ಕೆಲವೊಂದು ಅಪಘಾತಗಳು ಅದೆಷ್ಟೋ ಜನರನ್ನೂ ಪರಿಚಯಿಸಿ ಬದುಕಿನ ವಾಸ್ತವವನ್ನು ಅನಾವರಣಗೊಳಿಸುತ್ತದೆ.ಇಲ್ಲಿ ನಾಯಕ ಹಾಗೂ ನಾಯಕಿಯ ಬದುಕಿನ ಹಿಂದೆ ಇರುವ ಅವರಿಗೆ ತಿಳಿಯದ ಚರಿತ್ರೆಗಳು ಅನಾವರಣಗೊಂಡಾಗ ಅವರ ಬದುಕಲ್ಲಾಗುವ ಬದಲಾವಣೆ ಊಹೆಗೂ ನಿಲುಕದವುಗಳು.
ಇಲ್ಲಿ ಬರುವ ಸನ್ನಿವೇಶಗಳು ಎಲ್ಲರ ಬದುಕಿಗೆ ತೀರ ಹತ್ತಿರವಿರುವಂತವುಗಳೆ.ಇಲ್ಲಿ ಸ್ವತಂತ್ರ ನಂತರದ ಮೂರುದಶಕಗಳ ಹೆಣ್ಣಿನ ಬದುಕಿನ ಚಿತ್ರಣವಿದೆ.ಇಲ್ಲಿ ತನ್ನವರನ್ನು ಉಳಿಸಲು ಅವರಿಗೆ ಕವಚವಾಗಿ ಕೊನೆಗೆ ತಾವೇ ಬಲಿದಾನವಾಗೋ ಗಂಡಿನ ತ್ಯಾಗವಿದೆ.ಸ್ವಚ್ಛ ಪ್ರೇಮ,ಪರಿಶುದ್ದ ಸ್ನೇಹ,ಬಂಧು ಬಳಗಗಳ ನಡುವಿನ ಪ್ರೇಮ ಹಾಗೂ ಮಾತ್ಸರ್ಯ, ವೈಶಮ್ಯ ,ಸ್ವಾರ್ಥಿಗಳ ವಿಕೃತ ಮನಸ್ಸು ,ಹಲವಾರು ಮುಖವಾಡದ ಮನುಷ್ಯರ ನಿಜ ಸ್ವರೂಪ ಇವೆಲ್ಲ ಭಾವಗಳ ಮಿಶ್ರಣವೇ ಕಥೆಯಾದಳೆ ಕವಯಿತ್ರಿ